ಆರ್‌ಟಿಒಗಳಲ್ಲಿ ಡಿಎಲ್‌, ಆರ್‌ಸಿಗಳಿಗಾಗಿ ಪರದಾಟ; ಮಾಸಾಂತ್ಯದೊಳಗೆ ವಿತರಣೆ ಎಂದ ಅಧಿಕಾರಿಗಳು ಈ ಕಾರ್ಡ್‌ಗಳು ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರ್ ಟಿಒ ಕಚೇರಿಗಳಲ್ಲೇ ರಾಶಿ ರಾಶಿಯಾಗಿ ಬಿದ್ದಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಬೆಂಗಳೂರು: ಡ್ರೈವಿಂಗ್ ಲೈಸೆನ್ಸ್ ಗಾಗಿ ಪರೀಕ್ಷೆ ಬರೆದ ಅನೇಕರು ಡಿಎಲ್‌ಗಾಗಿ ಕಾಯುತ್ತಿದ್ದರೆ, ಹೊಸ ವಾಹನಗಳನ್ನು ನೋಂದಾಯಿಸಿದವರು ತಮ್ಮ ನೋಂದಣಿ ಪ್ರಮಾಣಪತ್ರ(ಆರ್‌ಸಿ)ದ ಸ್ಮಾರ್ಟ್ ಕಾರ್ಡ್‌ಗಾಗಿ ಎದುರು ನೋಡುತ್ತಿದ್ದಾರೆ.ಆದರೆ ಈ ಕಾರ್ಡ್‌ಗಳು ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರ್ ಟಿಒ ಕಚೇರಿಗಳಲ್ಲೇ ರಾಶಿ ರಾಶಿಯಾಗಿ ಬಿದ್ದಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಅಂಚೆ ಇಲಾಖೆ ಮೂಲಕವೇ ಈ ಕಾರ್ಡ್ ಗಳು ರವಾನೆಯಾಗಬೇಕಿದ್ದರಿಂದ ಡಿಎಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಾರಗಳೇ ಕಳೆದರೂ ತಮ್ಮ ಡಿಎಲ್‌ಗಳು ಇನ್ನೂ ಏಕೆ ಮನೆಗೆ ಬಂದಿಲ್ಲ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.ರಾಜಾಜಿನಗರ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ) ವ್ಯಾಪ್ತಿಗೆ ಒಳಪಡುವ 22 ವರ್ಷದ ಯುವಕ ಪೀಣ್ಯ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಚಾಲನಾ ಪರವಾನಗಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. “ನಾನು ಮೇ ಆರಂಭದಲ್ಲಿ ಪರೀಕ್ಷೆಗೆ ಹಾಜರಾಗಿದ್ದೆ. ಒಂದೂವರೆ ತಿಂಗಳಿಗಿಂತ ಹೆಚ್ಚು ದಿನಗಳು ಕಳೆದರೂ ಡಿಎಲ್ ಇನ್ನೂ ಬಂದಿಲ್ಲ,’’ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ಅನೇಕರು ತಮ್ಮ ಡಿಎಲ್‌ಗಳು ಮತ್ತು ಆರ್‌ಸಿ ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ.ರಾಜ್ಯ ಸಾರಿಗೆ ಇಲಾಖೆಯು ರಾಜ್ಯಾದ್ಯಂತ ಇರುವ 67 ಆರ್‌ಟಿಒಗಳಿಂದ ಡಿಎಲ್ ಮತ್ತು ಆರ್‌ಸಿಗಳನ್ನು ಸ್ಪೀಡ್‌ಪೋಸ್ಟ್ ಮೂಲಕ ವಿತರಿಸಲು ಕರ್ನಾಟಕ ಪೋಸ್ಟಲ್ ಸರ್ಕಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.ಡಿಎಲ್ ಮತ್ತು ಆರ್‌ಸಿಗಳನ್ನು ಪೋಸ್ಟ್ ಮಾಡಲು ವಿಳಂಬವಾಗುತ್ತಿರುವ ಬಗ್ಗೆ ತಮಗೂ ದೂರುಗಳು ಬಂದಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇತ್ತೀಚೆಗೆ ಸಾರಿಗೆ ಆಯುಕ್ತ ಯೋಗೀಶ್ ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ಈ ತಿಂಗಳ ಅಂತ್ಯದೊಳಗೆ ಸಂಗ್ರಹವಾದ ಎಲ್ಲಾ ಡಿಎಲ್‌ಗಳು ಮತ್ತು ಆರ್‌ಸಿಗಳನ್ನು ಪೋಸ್ಟ್ ಮಾಡುವಂತೆ ಎಲ್ಲಾ ಆರ್‌ಟಿಒಗಳಿಗೆ ತಿಳಿಸಲಾಗಿದೆ. ಅವರು ಸ್ಮಾರ್ಟ್ ಕಾರ್ಡ್‌ಗಳು ಸಿದ್ಧವಾದ ನಂತರ ತಕ್ಷಣ ಅವುಗಳನ್ನು ಪೋಸ್ಟ್ ಮಾಡಬೇಕು ಮತ್ತು ಯಾವುದೇ ವಿಳಂಬವಾಗಬಾರದು” ಎಂದು ಅಧಿಕಾರಿ ಹೇಳಿದ್ದಾರೆ.